ಬಾಗೇಶಪುರ -
ಕರ್ನಾಟಕ ರಾಜ್ಯದ ಅರಸೀಕೆರೆ ತಾಲ್ಲೂಕಿನ ದಕ್ಷಿಣದಂಚಿನಲ್ಲಿ ಅರಸೀಕೆರೆಯಿಂದ 18 ಕಿಮೀ ದೂರದಲ್ಲಿರುವ ಒಂದು ಗ್ರಾಮ. ಮೈಸೂರು-ಅರಸೀಕೆರೆ ರೈಲುಮಾರ್ಗದ ಒಂದು ನಿಲ್ದಾಣ. ಜನಸಂಖ್ಯೆ 1,505(1971).

ಇದು ಭೂವೈಜ್ಞಾನಿಕ ಮತ್ತು ಖನಿಜಗಳ ದೃಷ್ಟಿಯಿಂದ ಮುಖ್ಯ ಸ್ಥಳ. ಅತಿ ಪುರಾತನ ಪ್ರೀಕೇಂಬ್ರಿಯನ್ ಯುಗದ ಶಿಲೆಗಳಿಂದ ಸುತ್ತುವರಿಯಲ್ಪಟ್ಟ ಬಾಗೇಶಪುರದ ಪ್ರದೇಶದಲ್ಲಿ ರೂಪಾಂತರ ಶಿಲೆಗಳು (ಪದರುಶಿಲೆಗಳು ಮತ್ತು ನೈಸ್ ಶಿಲೆಗಳು) ಮತ್ತು ಪದರು ಶಿಲೆಗಳನ್ನು ಭೇದಿಸಿರುವ ಗ್ರಾನೈಟ್ ಶಿಲೆಗಳು ವಿಪುಲವಾಗಿವೆ. ಗ್ರಾನೈಟ್ ಶಿಲೆಗಳಲ್ಲಿ ಪೆಗ್ಮಟೈಟ್ ಗೌಣಶಿಲೆಗಳು ವಕ್ರವಕ್ರವಾದ ದಿಂಡು ಅಥವಾ ಸಿರಗಳ ರೂಪದಲ್ಲಿ ಅಂತಸ್ಸರಣ ಹೊಂದಿವೆ.

ಇಲ್ಲಿಯ ಅತಿ ಮುಖ್ಯ ಖನಿಜ ಬಿಳಿಜೇಡು ಅಥವಾ ಚೈನಾಮಣ್ಣು. ಮೂಲ ಶಿಲೆಗಳಾದ ಪೆಗ್ಮಟೈಟ್ ಮತ್ತು ಕಡಿಮೆ ಪ್ರಮಾಣದಲ್ಲಿ ಗ್ರಾನೈಟ್ ನೈಸ್‍ಗಳಲ್ಲಿರುವ ಫೆಲ್ಡ್‍ಸ್ಪಾರ್ ಎಂಬ ಮೂಲ ಖನಿಜ ಕಾಲಾಂತರದಲ್ಲಿ ನೈಸರ್ಗಿಕ ಶೀತೋಷ್ಣಗಳಿಂದ ಶಿಥಿಲ ಹೊಂದಿ ತನ್ನಲ್ಲಿರುವ ನೀರಿನ ಅಂಶ ಕಳೆದುಕೊಂಡು ಜಲರಹಿತ ಬಿಳಿಜೇಡಾಗಿ ಪರಿವರ್ತಿತವಾಗಿದೆ. ಕರ್ನಾಟಕದ ಖನಿಜಗಳ ವರ್ಗೀಕರಣದ ಪ್ರಕಾರ, ಬಾಗೇಶಪುರದ ಬಿಳಿಜೇಡನ್ನು ಫೆಲ್ಡ್‍ಸ್ಪಾರ್ ಮೂಲಾಂಶವುಳ್ಳ ಶಿಲೆಗಳ ಶಿಥೀಲೀಕರಣದಿಂದುಂಟಾಗುವ ಗೌಣ ಖನಿಜ ಅಥವಾ ಶಿಲ್ಕು ಖನಿಜ ಎಂದು ಕರೆಯಬಹುದು.

ಬಿಳಿ ಬಣ್ಣದ ಜೇಡು ನಿಕ್ಷೇಪಗಳು ಬಾಗೇಶಪುರದ ಪೂರ್ವ ಮತ್ತು ಪಶ್ಚಿಮದಲ್ಲಿ ಕಾಣಸಿಗುತ್ತವೆ. ಬಾಗೇಶಪುರಕ್ಕೆ 2 ಕಿ.ಮೀ. ಪಶ್ಚಿಮಕ್ಕಿರುವ ಜಂಬಿಟ್ಟಿಗೆಯ ಬಳಿಯಿರುವ ಝರಿಗಳ ತಳಗಳಲ್ಲೂ ಬಿಳಿಜೇಡುಪದರಗಳಿವೆ. ಅಲ್ಪಪ್ರಮಾಣದಲ್ಲಿ ತೊರೆಗಳ ಇಕ್ಕೆಡೆಗಳಲ್ಲಿಯೂ ಇವು ಕಾಣಸಿಗುತ್ತವೆ. ಈ ನಿಕ್ಷೇಪಗಳ ಗುಂಪಿಗೆ ಅಪ್ಪೇನಹಳ್ಳಿ ನಿಕ್ಷೇಪಗಳೆಂದು ಹೆಸರು. ಬಾಗೇಶಪುರದ ಪೂರ್ವಕ್ಕೆ ನಂದಿಹಳ್ಳಿ ನಿಕ್ಷೇಪಗಳಿವೆ. ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವರದಿಯ ಪ್ರಕಾರ ನಿಕ್ಷೇಪಗಳಲ್ಲಿ ಸುಮಾರು 2.5 ಲಕ್ಷ ಟನ್‍ಗಳಷ್ಟು ಬಿಳಿಜೇಡು ದೊರೆಯಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ಗಣಿ ಕಾರ್ಯ ಆರಂಭವಾದ ಬಳಿಕ ಇನ್ನೂ ಹೆಚ್ಚು ದೊರೆಯುವ ಸಾಧ್ಯತೆ ಇದೆಯೆಂದು ನಂಬಲಾಗಿದೆ.

ಗಣಿಯಿಂದ ಹೊರತೆಗೆದ ಜೇಡಿನಲ್ಲಿ ಮರಳು ಮತ್ತು ಅಭ್ರಕದ ಸೋಂಕಿರುವುದರಿಂದ ಜೇಡನ್ನು ಬಾಗೇಶಪುರದ ಪಶ್ಚಿಮದಲ್ಲಿ ಹಾಗೂ ಇತ್ತೀಚೆಗೆ ಪೂರ್ವದಲ್ಲಿ ಎತ್ತರವಾದ ಸ್ಥಳದಲ್ಲಿ ಕಟ್ಟಿರುವ ತೊಟಿಗಳಲ್ಲಿ ನೀರಿನ ಮಿಶ್ರಣದಿಂದ ರಾಡಿ ಮಾಡಿ ತಗ್ಗಿಗೆ ಹರಿದು ಹೋಗುವಂತೆ ಕಾಲುವೆಗಳಲ್ಲಿ ಹರಿಸಿ ಶುದ್ಧಿ ಮಾಡುವರು. ಶುದ್ಧ ಜೇಡು ಬೆಂಗಳೂರಿನ ಸರ್ಕಾರಿ ಪಿಂಗಾಣಿ ಕಾರ್ಖಾನೆ ಹಾಗೂ ಭದ್ರಾವತಿ ಕಾಗದ ಕಾರ್ಖಾನೆಗಳಿಗೂ ಅಶುದ್ಧ ಜೇಡು ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೂ ಸರಬರಾಜಾಗುತ್ತದೆ. ಶುದ್ಧ ಬಿಳೀಜೇಡನ್ನು ಪಿಂಗಾಣಿ, ಸಾಮಾನುಗಳ ತಯಾರಿಕೆ ಹಾಗೂ ವಿದ್ಯುದ್ವಾಹಕ ತಂತಿಗಳ ಪಿಂಗಾಣಿ ಊರೆಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಸದ್ಯದಲ್ಲಿ ಮೈಸೂರು ಮಿನರಲ್ಸ್ ಲಿಮಿಟೆಡ್ ಕಂಪೆನಿ ಗಣಿ ಕೆಲಸ ನಡೆಸುತ್ತಿದೆ. ವಾರ್ಷಿಕ ಕಚ್ಚಾ ಜೇಡಿನ ಉತ್ಪಾದನೆ 25,000-30,000 ಟನ್‍ಗಳೂ ಶುದ್ಧ ಜೇಡಿನ ಉತ್ಪಾದನೆ 7500-9000 ಟನ್‍ಗಳೂ ಇದೆ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ